u/harry_bosch88

ಹಳೆಯ ಪುಸ್ತಕ ಹುಡುಕಲು ಸಹಾಯಕ್ಕಾಗಿ ಮನವಿ.

ಯಾರಾದರೂ ಬೆಂಗಳೂರು ವಾಸಿಗಳು ಈ ವಾರ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆ ಅಥವಾ ಅವೆನ್ಯೂ ರಸ್ತೆ ಅಥವಾ ಲಾವಣ್ಯ ಪುಸ್ತಕ ಲೋಕದ ಕಡೆ ಹೋಗುವವರಿದ್ದರೆ ಮೆಸೇಜ್ ಮಾಡಿ. ಒಂದು ಪುಸ್ತಕಕ್ಕಾಗಿ ಹುಡುಕಾಡುತ್ತಿದ್ದೆ.

reddit.com
u/harry_bosch88 — 1 day ago

' forest ' by jeyamohan

Hi all,

I am looking for a book.

Translation of a Tamil novel ' kaadu' to English .

The English translation name is ' forest'.

Published in 2009.

Anyone have it kindly DM me.

reddit.com
u/harry_bosch88 — 6 days ago

​

ಜಾಣಗೆರೆ ವೆಂಕಟರಾಮಯ್ಯನವರೆಂದರೆ 'ಕನ್ನಡ ರಕ್ಷಣಾ ವೇದಿಕೆ' ಯ ಸಂಸ್ಥಾಪಕ ಅಧ್ಯಕ್ಷ ಎಂದರೆ ಬಹಳ ಸರಳ ಮಾತಾಗುತ್ತದೆ. ಸಾಹಿತಿ ಎಂದರೆ ಅದೂ ಸಂಪೂರ್ಣ ನ್ಯಾಯ ಒದಗಿಸಿದ ಹಾಗೆ ಆಗುವುದಿಲ್ಲ. ಕನ್ನಡ ಚಳುವಳಿ ಹೋರಾಟಗಾರ, ಕೃಷಿಕ ಹೀಗೆ ಹಲವಾರು ಸಾಹಸಗಳ ಸೇರಿಸಬಹುದು.

ಅವರು ವಾಟಾಳ್ ನಾಗರಾಜರ ಕೇಂದ್ರವಾಗಿಟ್ಟುಕೊಂಡು ಬರೆದ ' ಅವತಾರ ಪುರುಷ' ಕಾದಂಬರಿ, ಕನ್ನಡ ಚಳುವಳಿ ಕುರಿತಾದ ' ಸವೆಯದ ಹಾದಿ' ಇತ್ಯಾದಿ ಓದಿ ಮೆಚ್ಚಿಕೊಂಡಿದ್ದೆ.

ಹಾಗಾಗಿ ಅವರ ಆತ್ಮಕಥೆ ಕುತೂಹಲಕಾರಿ ಇರಬಹುದು ಎಂಬ ಅಂದಾಜಲ್ಲಿ ಓದಿದ್ದು.

ಇದನ್ನು ಹೋರಾಟದ ಹಾದಿ ಎನ್ನಬಹುದಾ? ಸಂಘರ್ಷದ ಬದುಕು ಎನ್ನಬಹುದಾ? ಹಳ್ಳಿಯ ಕುಟುಂಬದಿಂದ ಬಂದು ಓದಿನಿಂದ ಹಿಡಿದು ಬದುಕು ಕಟ್ಟಿಕೊಳ್ಳುವವರೆಗಿನ ಪಯಣದ ಒಂದೊಂದು ವಿವರವೂ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿದ ರೀತಿ.

ಸಿದ್ದಗಂಗಾ ಮಠದಲ್ಲಿ ಓದಿದ ಅನುಭವ, ಅಭಿಮಾನಿ ಪತ್ರಿಕೆಯ ಕೆಲಸದ ಅನುಭವ, ಕನ್ನಡ ಚಳುವಳಿಯ ಹೋರಾಟದ ಅನುಭವ, ಪ್ರಿಂಟಿಂಗ್ ಪ್ರೆಸ್ ಕೆಲಸದ ಅನುಭವ, ಲಂಕೇಶ್ ಪತ್ರಿಕೆಯ ಆರಂಭದ ದಿನಗಳ ಕೆಲಸ, ಕನ್ನಡ ಚಳುವಳಿ ಹೋರಾಟಗಾರರ ನಿಜಬಣ್ಣ ,ಜಯಕರ್ನಾಟಕದ ಅನುಭವ ಹೀಗೆ ಹಲವಾರು ಕಹಿ ಸಿಹಿ ಅನುಭವಗಳ ಸಂಕಥನ ಈ ಪುಸ್ತಕ ‌

ಸದ್ಯದ ಮಟ್ಟಿಗೆ ಬಂದ ಒಳ್ಳೆಯ ಆತ್ಮಕಥೆಗಳಲ್ಲಿ ಒಂದು.

u/harry_bosch88 — 18 days ago

​

ಇದು ಇವರ ಮೊದಲ ಕಾದಂಬರಿ. ಐವತ್ತರ ದಶಕದ್ದು.ಸಂಪ್ರದಾಯಬದ್ಧ ಅಂತ ಹೇಳಿಕೊಂಡಿರುವ, ಆ ಪ್ರಕಾರದ ಲಕ್ಷಣಗಳ ಅಳವಡಿಸಿಕೊಂಡಿರುವ ಕಾದಂಬರಿ.

ಗಂಗವ್ವ, ಅವಳ ಮಗ ಕಿಟ್ಟಿ, ಗಂಗವ್ವ ನ ತಮ್ಮ ರಾಘವ, ದೇಸಾಯರು, ಕಿಟ್ಟಿಯ ಹೆಂಡತಿ ರತ್ನ, ಕಿಟ್ಟಿಯ ಕಛೇರಿಯ ಜನ ಇವಿಷ್ಟು ಮುಖ್ಯ ಪಾತ್ರಗೞ ಇಟ್ಟುಕೊಂಡು ಆ ಕಾಲಕ್ಕೆ ಬರೆದ ಇದು ಒಂದು ಕ್ಲಾಸಿಕ್. ಕಾಶೀ ಯಾತ್ರೆಗೆ ಹೋಗಿಬರುವಾಗ ಗಂಗವ್ವನಿಗೆ ತಾನು ಗಂಗೆಯ ತರುವುದು ಸಾವಿಗಂಜಿ ಅಂತಂದುಕೊಂಡು ಬದುಕಬೇಕು ಅನ್ನುವ ಛಲದಲ್ಲಿ ಗಂಗೆಯ ಚೆಲ್ಲುತ್ತಾಳೆ. ಅವಳ ಕೊಂಚ ರೊಕ್ಕ ದೇಸಾಯರ ಬಳಿ ಭದ್ರ ವಾಗಿದೆ. ಮಗನ ಮೇಲೆ ಗಂಗವ್ವನ ಹಿಡಿತ ಬಿಗಿ ಯಾಗಿದೆ. ಮಗ ಕಿಟ್ಟಿಗಾದರೋ ಕಛೇರಿಯಲ್ಲಿ ಕೆಲಸ‌ ಹೊಸತಾದ ಕಾರಣ ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಗಂಗವ್ವನ ತಮ್ಮ, ಕಿಟ್ಟಿಯ ಸೋದರಮಾವ ರಾಘವನ ಪ್ರವೇಶವಾಗುತ್ತದೆ. ಅವನಿಗೂ ಗಂಗವ್ವನಿಗೂ ಹಳೆಯ ವೈರ. ಈಗ ರಾಘವನಿಗೆ ತನ್ನ ಮಗಳ ಕಿಟ್ಟಿಗೆ ಮಾಡಿಕೊಡಬೇಕೆಂಬ ಆಸೆ; ಅದಕ್ಕಾಗಿ ಕಿಟ್ಟಿಯ ಮೇಲಾಧಿಕಾರಿಗೂ ತನಗೂ ಇದ್ದ ಪರಿಚಯದ ಮೂಲಕ ಕಿಟ್ಟಿಯ ಮೇಲೆ ಪ್ರಭಾವ ಬೀರುತ್ತಾನೆ.ಈ ತಂತ್ರಗಳ ಬಲೆಗೆ ಗಂಗವ್ವ ಪ್ರತಿ ತಂತ್ರ ಹೂಡಿದರೂ ಮಗನ ಆಗ್ರಹಕ್ಕೆ ಮಣಿದು ಮದುವೆಗೆ ಸಮ್ಮತಿಸುತ್ತಾಳೆ. ಹೊಸ ಸಂಸಾರದಲ್ಲಿ ಯಾವತ್ತಿನ ಅತ್ತ ಸೊಸೆ ಜಗಳ, ಮಗನ ಮಾತಿಗೆ ಕೋಪಗೊಂಡು ಹೊರಟರೆ ಎಲ್ಲಿ ಅವನು ತಮ್ಮ ರಾಘವನ ಬಲೆಯ ಒಳಗೆ ಬೀಳುತ್ತಾನೋ ಎಂಬ ದುಃಖದಿಂದ ಹಲ್ಲು ಮುಡಿ ಕಚ್ಚಿ ಅವಮಾನ ತಾಳಿಕೊಂಡು ಬದುಕುವ ಗಂಗವ್ವ, ಇದರ ನಡುವೆ ದೇಸಾಯರ ಉಡಾಳ ಮಗ ವಸಂತ, ಕಿಟ್ಟಿಯ ಕಛೇರಿಯ ಬದುಕಿನ ಬದಲಾವಣೆ, ಇವೆಲ್ಲ ಬರುತ್ತದೆ.ಬದುಕಿನ ನದಿಯ ಒಂದು ಹರಿವಿನ ಚಿತ್ರಣ ಮುಗಿದು ಹೊಸ ನೀರು ಬರುವಲ್ಲಿಗೆ ಕಾದಂಬರಿ ಮುಗಿಯುತ್ತದೆ.

ಶಂಕರ ಮೊಕಾಶಿ ಪುಣೇಕರ್ ಸೃಷ್ಟಿಸಿದ ಗಂಗವ್ವ ನಾನು ಕಂಡ ಸಶಕ್ತ ಸ್ತ್ರೀ ಪಾತ್ರಗಳಲ್ಲೊಂದು. (ಇನ್ನೆರಡು ಅವರದೇ ಅವದೇಶ್ವರಿಯ ಪುರುಕ್ಸುತಾನಿ,ಗೃಹಭಂಗದ ನಂಜಮ್ಮ) ಬದುಕು ಎಸೆವ ಯಾವ ಸವಾಲುಗಳಿಗೂ ಅಂಜದೆ ಬದುಕುವ ಗಟ್ಟಿಗಿತ್ತಿ. ಈ ಕಾದಂಬರಿಯ ವೈಶಿಷ್ಟ್ಯ ಇರುವುದು ಪಾತ್ರಗಳ ಮನಸಿನ ಆಳಕ್ಕೆ ಪಾತಾಳಗರಡಿ ಹಾಕಿ ಅವುಗಳ ದರ್ಶನ ಮಾಡಿಸುವ ಬಗೆಯಲ್ಲಿ. ಅದರಿಂದಾಗಿ ನಮಗೆ ಆ ಪಾತ್ರಗಳೊಡನೆ ಒಡನಾಡಿದ ಭಾವ ಬರುತ್ತದೆ.

'ಚಿಕ್ಕಪುಟ್ಟ ಕಲಹಗಳು ಬಾಳಿನ ಏಕತಾನಕ್ಕೆ ನಡುನಡುವೆ ನಲುಗಾಗಿ ಬಂದು ಸೊಗಸನ್ನು ಹೆಚ್ಚಿಸುತ್ತಿದ್ದವು' ಎಂಬ ಒಂದೇ ವಾಕ್ಯದಲ್ಲಿ ಇಡೀ ಕಾದಂಬರಿಯ ಸಾರ ಅಡಗಿದೆ.

ಸಾವಧಾನದ ಓದಿಗೆ ರುಚಿಸುವ , ನಿಧಾನಗತಿಯ ಈ ಪುಸ್ತಕ ಓದಬೇಕಾದ್ದು.

ಈ ಕಾದಂಬರಿ ‌ಯಾಕೆ ಮಹತ್ವದ್ದು ಎಂದರೆ, ಇದು ಸಾಂಪ್ರದಾಯಿಕ ಕಾದಂಬರಿ. ಕಾದಂಬರಿ ಸ್ವರೂಪದ ಎಲ್ಲಾ ನಿಯಮಗಳ ಪಾಲಿಸುವ, ಎಲ್ಲೂ ಗದ್ದಲವಿಲ್ಲದ(ಬಹುಶಃ ಇದು ಬಂದ ಕಾಲವೂ ಕಾರಣವಿರಬಹುದು) ಕಾದಂಬರಿ.

ಸೂಕ್ಷ್ಮವಾಗಿ ಗಮನಿಸಿದರೆ ವಿವೇಕ ಶಾನಭಾಗರ ' ಒಂದು ಬದಿ ಕಡಲು' ವಿನ ಕೇಂದ್ರ ‌ಕಥಾಪಾತ್ರ ಇದೇ ಗಂಗವ್ವ ಎಂದು ಯಾರಿಗಾದರೂ ಹೊಳೆಯುತ್ತದೆ.

ಆಸಕ್ತ ಲೇಖಕರು ತಮ್ಮ ಪ್ರತಿಭೆಯ ಸಾಣೆ ಹಿಡಿಯಲು ಇವರ ಮೂರೂ ಕಾದಂಬರಿ ಓದಿದರೆ ಕನ್ನಡದ ಓದುಗರಿಗೆ ಒಳ್ಳೆಯದು

u/harry_bosch88 — 23 days ago

ಮೊಗಳ್ಳಿ ಗಣೇಶರ ಆತ್ಮಕಥೆ ಓದಲು ಅವರು ಸಂದುಹೋದ ಮೇಲೆ ಸಂದರ್ಭ ಒದಗಿತು. ' ತೊಟ್ಟಿಲು' ಅಂತಹ ಅತ್ಯುತ್ತಮ ಕೃತಿ ಓದಿಯೂ ಇವರ ಯಾಕೆ ಓದಲಿಲ್ಲ ಎಂಬುದು ಪ್ರಶ್ನೆ. ಅದಕ್ಕೆ ಕಾರಣವೂ ಇತ್ತು. ದಲಿತ ವರ್ಗದ ನೋವಿನ ಕತೆಗಳ‌ ರೊಮಾಂಟಿಕ್ ಆಗಿ ಬರೆಯುವ ಹಲವಾರು ಲೇಖಕರ ಓದಿ ಪೂರ್ವಗ್ರಹ ಬಂದಿತ್ತು. ಇನ್ನು ಹಲವರು ಆ ನೆಪದಲ್ಲಿ ಬರಿಯ ಬ್ರಾಹ್ಮಣರ ಬೈಯ್ಯುವುದನ್ನೇ ಬರವಣಿಗೆ ಎಂದು ತಿಳಿದಿದ್ದಾರೆ.

ಆದರೆ ಮೊಗಳ್ಳಿ ಗಣೇಶ್ ಬರೆದಾಗ ಅದು ಮಾರ್ಕೆಸನ ಬರವಣಿಗೆ ಹಾಗೆ ಕಂಡಿತು ನನಗೆ.

ಅವರ ವಿಚಾರಗಳು ಗಾಳಿಯ ಹಾಗೆ, ಭಾವಕ್ಕೆ ಬರುತ್ತದೆ. ಕೈಗೆ ,ತರ್ಕಕ್ಕೆ ಸಿಗುವುದಿಲ್ಲ.

ಅವರ ಆತ್ಮಕಥೆ ಓದುವಾಗ ಯಾರೋ ಮರಕ್ಕೆ ಕಟ್ಟಿಹಾಕಿ ಚಾಟಿಯಲ್ಲಿ ಬಡಿಯುವ ಭಾವನೆ.

ತಮ್ಮ ಇಡಿಯ ಜೀವನವನ್ನು ಹಿಂಸೆಯಿಂದ ಅದರಲ್ಲೂ ಸ್ವಂತ ಅಪ್ಪನಿಂದ ಶೋಷಣೆಗೆ ಒಳಗಾಗಿ ಕೀಳರಿಮೆ ಬೆಳೆಸಿಕೊಂಡು ಅದನ್ನು ಮೀರಲು ಓದಿ ಓದಿದ ಮೇಲೆ‌ ಕತೆಗಾರನಾಗಿ ಪ್ರೊಫೆಸರ್ ಆಗಿ ಮೇಲೆ ಬಂದರೂ ತಮ್ಮ ವ್ಯಸನ ಹಾಗೂ ಭಾವುಕತೆಯಿಂದ ಕಾಲನ ಹೊಡೆತಕ್ಕೆ ಸಿಕ್ಕಿ ನುಗ್ಗು ನುಗ್ಗಾದ ಲೇಖಕ ಅವರು.

ಹಾಗೆಂದು ಈ ಕೃತಿಯ ಬಗ್ಗೆ ತಕರಾರು ಇಲ್ಲವೆಂದು ಇಲ್ಲ. ಬ್ರಾಹ್ಮಣರ ಸಭ್ಯ ಬದುಕಿನ ಬಗ್ಗೆ ಅಲ್ಲಲ್ಲಿ ಮಾತುಗಳು ನನಗೆ ಇಷ್ಟವಾಗಲಿಲ್ಲ. ಹಾಗೆ ಬದುಕುವುದು ತಪ್ಪೇ? ಭೈರಪ್ಪರ ಬಗೆಗಿನ ಒಂದು ಪ್ಯಾರಾ ಕೂಡ ಪೂರ್ವಗ್ರಹ ಪೀಡಿತ ಅನಿಸಿತು.

ಅದಲ್ಲದೆ ತನ್ನ ಹೊಗಳಿದವರ ವಾಚಾಮಗೋಚರ ಹೊಗಳಿ ಬರೆದ ರೀತಿಯೂ ಇದೆ.

ಇಡಿಯ ಪುಸ್ತಕ ಒಂದು ಕನಸಿನ ಹಾಗೆ ಭಾಸವಾಗುತ್ತದೆ.‌ ಆದರೆ ಇದನ್ನು ಓದುವಾಗ ಗಾಢ ವಿಷಾದವೊಂದು ನದಿಯ ಹಾಗೆ ಒಳಗೆ ಹರಿಯುತ್ತದೆ. ಬಹುಶಃ ಮೊಗಳ್ಳಿ ಗಣೇಶರಿಗೆ ಅವರ ಬಾಲ್ಯದ ನೋವುಗಳೇ ಜೀವಮಾನವಿಡೀ ಕಾಡಿತು ಎಂದೆನಿಸಿತು.

ತನ್ನ ಆಸೆಗಳ ಬಗ್ಗೆ ,ವ್ಯಸನದ ಬಗ್ಗೆ ಮುಚ್ಚುಮರೆ ಇಲ್ಲದೆ ಬರೆದ ಬಗೆಯೂ ಚೆನ್ನಾಗಿದೆ.

ಅಪರೂಪದ ಆತ್ಮಕಥೆ.

u/harry_bosch88 — 26 days ago

ಓದುಗರಿಗೆ ನಮಸ್ಕಾರ.

ಕೋವಿಡ್ ದಿನಗಳಲ್ಲಿ ಏಕಾಂತವಾಸದಲ್ಲಿ ಓದಿದ ಜಗದ್ವಿಖ್ಯಾತ ಫ್ಯಾಂಟಸಿ ಕಾದಂಬರಿ ತ್ರಿವಳಿ ' ಲಾರ್ಡ್ ಆಫ್ ದಿ ರಿಂಗ್ಸ್' ಅದನ್ನು ಅನುವಾದಿಸುವ ಮತ್ತು ಅದರಲ್ಲಿನ ನಿಗೂಢ ಅಂಶಗಳ ಸರಳವಾಗಿ ತರ್ಜುಮೆ ಮಾಡುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ಅನಿಸಿತ್ತು. ಆದರೆ ಆ ಕತೆಗಳ ಮೂಲ ' ಹಾಬಿಟ್ ' ಎಂಬ ಕಾದಂಬರಿ. ಜೆ.ಆರ್.ಆರ್. ಟಾಕಿನ್ ಬರೆದ ಈ ಕಾದಂಬರಿ ಅತ್ಯಂತ ಸರಳವಾಗಿ ಮೇಲ್ನೋಟಕ್ಕೆ ಮಕ್ಕಳಿಗಾಗಿ ಬರೆದ ಸಾಹಸ ಯಾತ್ರೆಯ ಕತೆ ಎನಿಸಿದರೂ ಅದು ನಿಜವಾಗಿ ದೊಡ್ಡವರಿಗಾಗಿ ಬರೆದ ಸ್ಫೂರ್ತಿಯ ಕತೆಯೂ ಹೌದು. ಮನುಷ್ಯನ ಗುಣಾವಗುಣಗಳ ಚಿತ್ರಣವೂ ಹೌದು. ಇದನ್ನು ಅನುವಾದಿಸಲೇಬೇಕು ಎಂಬ ಆಸೆ ಹುಟ್ಟಿ ಅನುವಾದಿಸಿ ವರ್ಷಗಳೇ ಉರುಳಿದವು. ಆ ಕೃತಿಗಳು ಸಿನಿಮಾಗಳಾಗಿ ಟಿವಿ ಸರಣಿಗಳಾಗಿ ಜನಪ್ರಿಯತೆ ಪಡೆದಿದ್ದವು. ಹಾಗಾಗಿ ಕನ್ನಡದ ಈ ಸಣ್ಣ ಮಾರುಕಟ್ಟೆಯ ದೃಷ್ಟಿಯಲ್ಲಿಟ್ಟುಕೊಂಡು ನಾವು ಕಳಿಸಿದ ಹಕ್ಕುಪತ್ರಕ್ಕೆ ಅವರಿಂದ ಮಾರುತ್ತರ ಪಡೆಯಲು ಇಷ್ಟು ಸಮಯವಾಯಿತು. ಕೊನೆಗೂ ಅವರ ಅನುಮತಿ ಪಡೆದದ್ದು ಬರೆದರೇ ಅದೇ ಒಂದು ಕಥೆ.

ನಮ್ಮವರು ನಮ್ಮ ಭಾಷೆಯಲ್ಲಿ ಜಗತ್ತಿನ ಅತ್ಯುತ್ತಮ ಕೃತಿಗಳ ಓದಬೇಕು ಆ ಮೂಲಕ ಈ ಓದಿನ ಖುಷಿ ನಾವು ಪಡೆದುಕೊಂಡದ್ದು ಅವರಿಗೂ ದಾಟಿಸಬೇಕು ಎನ್ನುವುದರ ಹೊರತಾಗಿ ಬೇರೆ ಯಾವ ಆಸೆಯೂ ಅನುವಾದಕನಾಗಿ ನನಗಿಲ್ಲ.

ಲಾಭಕ್ಕಾಗಿ ಕನ್ನಡದಲ್ಲಿ ಬರೆಯಬೇಕಾದ ಪರಿಸ್ಥಿತಿಯೂ ಇಲ್ಲ. ಈ ಹಿಂದೆ ಮಾಡಿದ ಸಾಹಸಗಳೂ ಇಂತಹದ್ದೇ ಆಸೆಯಿಂದ ಮಾಡಿದ್ದು.

ಹಾಗಾಗಿ ಅನುವಾದಿಸುವಾಗ ನನಗೆ ಸಿಕ್ಕ ಖುಷಿ ಓದುವಾಗ ನಿಮಗೂ ಆದರೆ ಅದೇ ಸಾರ್ಥಕ. ಪ್ರಕಾಶಕರಿಗೂ ,ಒತ್ತಾಸೆಯಾಗಿ ನಿಂತ ಮಡದಿ ಸಿಂಧೂವಿಗೂ, ಮಕ್ಕಳು ಸಾಂಗತ್ಯ ಹಾಗೂ ಪ್ರದ್ಯುಮ್ನರಿಗೂ ತುಂಬಾ ಪ್ರೀತಿ.

ಇದನ್ನು ಓದಿ ಹಲವು ಮಜಲುಗಳಲ್ಲಿ ಹರಡಿಕೊಂಡಿರುವ ಪಾಶ್ಚಾತ್ಯ ಸಾಹಿತ್ಯಕ್ಕೆ ನೀವು ತೆರೆದುಕೊಂಡರೆ ಅದೇ ನನ್ನ ಗೆಲುವು.

ಧನ್ಯವಾದ.

u/harry_bosch88 — 28 days ago

ನನಗೆ ಒಮ್ಮೊಮ್ಮೆ ತುಂಬಾ ವಿಷಾದವಾಗುತ್ತದೆ.

ಕಾರಂತಜ್ಜ ತೀರಿಕೊಂಡದ್ದು 1997ರಲ್ಲಿ. ನನಗಾಗ ಒಂಬತ್ತು ವರ್ಷ. ‌ಯಾವುದೋ ಶಾಲಾ ಪ್ರವಾಸ ಮುಗಿಸಿ ( ಬಹುಶಃ ಬಿ.ಸಿ.ರೋಡಿಂದ ಮಂಗಳೂರಿಗೆ) ಸ್ಕೂಲ್ ಬಸ್ ಬರುವಾಗ , ದಾರಿಯಲ್ಲಿ ಸಿಕ್ಕ ಯಾರೋ ಒಬ್ಬರು " ಕಾರಂತಜ್ಜೇರ್ ಪೋಯೆರ್‌ಗೆ. ಎಲ್ಲೆ ಸಾಲೆಗ್ ರಜೆ " ಎಂದಿದ್ದರು. ಹೋದದ್ದು ದೊಡ್ಡ ಆಲದ ಮರ ಎಂಬುದೆಲ್ಲ ಅರ್ಥವಾಗದ ಪ್ರಾಯ.

ಅಂದರೆ ಈಗ ಅವರು ತೀರಿಕೊಂಡು ಇಪ್ಪತ್ತೊಂಬತ್ತು ವರ್ಷಗಳಾಯಿತಲ್ವ. ಈಗಿನ ಪೀಳಿಗೆಗೆ ಅವರು ಒಳಗೆ ಇಳೀದಾರಾ? ಹೀಗೊಬ್ಬರು ಇದ್ದಿದ್ದರು ಎಂದು ಅವರ ಬದುಕಿನ ಮಹತ್ವ ಗೊತ್ತಾಗಬಹುದಾ? ಯಾಕೆಂದರೆ ಅವರು ಬರೆದ ಕೃತಿಗಳ ಪರಿಸರ ನಮ್ಮ ಕಾಲಕ್ಕೇ ಮಸುಕು ಮಸುಕು. ನನ್ನ ಮಗ ಮೊನ್ನೆ ಅಜ್ಜಿ ಮನೆಗೆ ಹೋದವನು ಬೀಗ ಹಾಕುವುದನ್ನು ತೆರೆಯುವುದನ್ನು ಅಚ್ಚರಿಯಿಂದ ನೋಡುತ್ತಿದ್ದ.. ಬಹುಶಃ ದನದಿಂದ ಹಾಲು ಕರೆಯುವುದು ಅವನು ನೋಡಿದ್ದರೂ ಅವನಿಗೆ ನೆನಪಿರುವುದು ಅನುಮಾನ.

ಹಾಗೆಲ್ಲ ಇರುವಾಗ ಈ ಹಿರಿಯರು ಬರೆದ ಹೆಚ್ಚಿನ ವಿಚಾರಗಳಿಗೆ ಈಗಿನವರು ಕನೆಕ್ಟ್ ಆಗುವುದು ಹೇಗೆ?

ನಾನು ಓದುಗರ ಗಮನಿಸುತ್ತೇನೆ. ತೇಜಸ್ವಿ..ತೇಜಸ್ವಿ ಒಂದೇ ಅವೆ ಹೆಬ್ಬಾಗಿಲು ಅದನ್ನು ದಾಟಿ ಮುಂದೆ ಹೋಗುವುದೇ ಇಲ್ಲ. ಕುವೆಂಪು ಅವರ ಕಾದಂಬರಿಗಳ‌ ಉಲ್ಲೇಖ ಬರುತ್ತದೆಯಾದರೂ ಹೊಸ ಓದುಗರು ಅವರ ಬೃಹತ್ ಕಾದಂಬರಿಗಳ ಓದಿ ಬರೆದದ್ದು ಕಂಡದ್ದು ಅಪರೂಪ.‌ಕವಿತೆಗಳ ಕತೆಯೂ ಹಾಗೆ.

ಇವರಿಬ್ಬರೂ ಆಗಾಗ ತಮ್ಮ ಸಾಹಿತ್ಯದ ಪ್ರತಿಭೆಯಿಂದ ಬೆಳಗಿದವರು ಈಗಿನ ಹಲವು ಜಾತಿರೋಗ ಪೀಡಿತರ ರಾಜಕೀಯಕ್ಕೆ ಗುರಾಣಿಯಾಗಿ ಸಿಕ್ಕಿದ್ದು ಬೇಸರದ ವಿಷಯ.‌ ಬಿಡಿ. ಕೊನೆಗೆ ಉಳಿಯುವುದು ಅವರಿಬ್ಬರ ಓದುವಾಗ ಆಗುವ ಖುಷಿ ಮಾತ್ರ .ಉಳಿದದ್ದು ಗೌಣ.

ಹಾಗಾದರೆ ಮಾಸ್ತಿಯವರ ಕಳೆದ ಶತಮಾನದ ಪೂರ್ವಾರ್ಧದ ಕತೆಗಳು? ಗೊರೂರರ ಕತೆಗಳು ಇವೆಲ್ಲ ಹೇಗೆ ಓದುಗರಿಗೆ ಕನೆಕ್ಟ್ ಆಗಬಹುದು?

ಹ್ಯಾರಿ ಪಾಟರ್ ಬುಕ್ ಸೆಟ್, ಎನಿಡ್ ಬ್ರೈಟನ್ ಬುಕ್ ಸೆಟ್ ,ಸುಧಾ ಮೂರ್ತಿ ಬೆಳೆದ ಹಾಗೆ ಕಾಲಿನ್ ಹೂವರ್ ..ಇವರಾಚೆಗೆ ನಮ್ಮ ಇಂಗ್ಲಿಷ್ ಓದುಗರೂ ಬೆಳೆದ ಹಾಗೆ ಕಾಣುತ್ತಿಲ್ಲ.

ಮಿಲನ್ ಕುಂದೆರಾ, ಹೆಮಿಂಗ್‌ವೇ ತರಹದವರು ಈಗಲೂ ಪ್ರಸ್ತುತವೇ ಎಂಬ ಪ್ರಶ್ನೆ ಕಾಡುತ್ತದೆ.

ಮೂವತ್ತು ಸೆಕೆಂಡಿನ ವಿಡಿಯೋ ನೋಡಲು ಉದಾಸೀನ ಮಾಡುವ ನಾವು,

ದೊಡ್ಡ ಮೀನೊಂದರ ಹಿಡಿಯಲು ಕಾದ ಅಜ್ಜನ ತಾಳ್ಮೆ, ಬೆಟ್ಟ ಗುಡ್ಡಗಳಲ್ಲಿ ಅಲೆದಾಡಿ ಅಲ್ಲಿ ಮನೆ ಕಟ್ಟಿ ಕೃಷಿ ಮಾಡಿದವರ ಬದುಕಿನ ಸಾಹಸ ಕತೆಯ ತಾಳ್ಮೆಯಿಂದ ಓದಬಲ್ಲೆವಾ?

ನಾವು ಕಷ್ಟಪಟ್ಟು ಹುಡುಕಾಡಿ ಸಂಪಾದಿಸಿ ಓದಿ ಚಿನ್ನದ ಗಟ್ಟಿಯ ಹಾಗೆ ಕಾಪಿಟ್ಟ ಪುಸ್ತಕಗಳು ನಮ್ಮ ಮುಂದಿನ ಪೀಳಿಗೆಗೆ ' ಅಜ್ಜ ಕಸ ಒಟ್ಟು ಮಾಡಿದ್ದ' ಎಂದು ಅನಿಸದಿದ್ದರೆ ಸಾಕು...

u/harry_bosch88 — 1 month ago